ಗೊಂದಲದ ಗೂಡಿನ ನಡುವೆ ಭರವಸೆಯ ಕಿರಣ
ಹಕ್ಕಿಯ ಗೂಡಿನಲ್ಲಿ ಒಂದೆರಡು ಸಂಗತಿಗಳ ಬಗ್ಗೆ ಮಾತನಾಡಬೇಕು.
‘ವಿಕ್ರಾಂತ ಕರ್ನಾಟಕ’ ಎಂಬ ಕನ್ನಡ ವಾರಪತ್ರಿಕೆಯನ್ನು ಪ್ರಾರಂಭಿಸಿದ ರವಿ ಕೃಷ್ಣಾರೆಡ್ಡಿಯವರ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ತಮ್ಮ ಬ್ಲಾಗಿನಲ್ಲಿ ಅವರು ನನ್ನ ಬಗ್ಗೆ ಬರೆದದ್ದನ್ನು ಪ್ರಸ್ತಾಪಿಸಿದ್ದೆ. ಅವರು ಈಗ ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದಾರೆ. ಒಂದಿನಿತೂ ವಾಮಮಾರ್ಗವನ್ನು ಬಳಸದೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಿಸಬೇಕು ಎಂಬುದು ಅವರ ಅಭಿಲಾಶೆ. ತಮ್ಮ ಪರಿಚಯ ಹಾಗೂ ರಾಜಕೀಯ ನಿಲುವುಗಳನ್ನು ಸ್ಪಷ್ಟಪಡಿಸಲು ಒಂದುಅಂತರ್ಜಾಲ ತಾಣ ತೆರೆದಿದ್ದಾರೆ. ಹಿಂದೊಮ್ಮೆ ಅವರು ತಮ್ಮ ‘ಅಮೇರಿಕಾದಿಂದ ರವಿ’ ಅಂಕಣದಲ್ಲಿ ಅಮೇರಿಕಾದಲ್ಲಿ ನಡೆಯುವ ಚುನಾವಣೆಯಲ್ಲಿ ಹೇಗೆ ಒಂದು ಪಕ್ಷ ತನಗೆ ಹರಿದು ಬರುವ ದೇಣಿಗೆ ರೂಪದ ಹಣದ ಪೈಸೆ-ಪೈಸೆಗೂ ಲೆಕ್ಕ ಕೊಡಬೇಕು ಎಂಬುದನ್ನು ಪ್ರಸ್ತಾಪ ಮಾಡಿದ್ದರು. ನಮ್ಮ ರಾಜಕಾರಣದಲ್ಲಿ ಇಂಥ ವ್ಯವಸ್ಥೆ ಇದ್ದರೆ ಚೆಂದ ಎಂದು ಅಭಿಪ್ರಾಯ ಪಟ್ಟಿದ್ದರು. ಆ ಮೇಲ್ಪಂಕ್ತಿಯನ್ನು ಪಾಲಿಸುವತ್ತ ಅವರು ಹೆಜ್ಜೆ ಇಟ್ಟಿದ್ದಾರೆ. ಚುನಾವಣೆಯ ಪ್ರಚಾರದ ಖರ್ಚಿಗೆ ಚುನಾವಣಾ ಆಯೋಗ ವಿಧಿಸಿರುವ ಹತ್ತು ಲಕ್ಷದ ಮಿತಿಯೊಳಕ್ಕೆ ಹಣವನ್ನು ಐಟಿ ಉದ್ಯೋಗಗಳಿಂದ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದಾರೆ. ಜಯನಗರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಮತದಾರರು ಹಾಗೂ ಐಟಿ ಉದ್ಯೋಗಿಗಳಿರುವುದರಿಂದಾಗಿ ತಮ್ಮ ಯೋಜನೆಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯಬಹುದು ಎಂಬುದು, ಎಲ್ಲಾ ಕಟಕಿ, ವ್ಯಂಗ್ಯಗಳ ನಡುವಿನ ಅವರ ಆಶಾಭಾವ. ರವಿಯವರ ಉತ್ಸಾಹಕ್ಕೆ ಪುರಸ್ಕಾರ ಸಿಕ್ಕಲಿ, ಅವರು ನಿರಾಶರಾಗದಿರಲಿ ಎಂದು ಹಾರೈಸುವೆ.
ನನ್ನ ವೈಚಾರಿಕ ಅಲೆಮಾರಿತನದ ಬಗ್ಗೆ, ಹಿಂದುತ್ವ, ಜಾತ್ಯಾತೀತವಾದಗಳ ಸತ್ವಹಾಗೂ ಟೊಳ್ಳಿನ ಬಗೆಗಿನ ಗೊಂದಲವನ್ನು ನನ್ನ ಹಲವಾರು ಪೋಸ್ಟುಗಳಲ್ಲಿ ವ್ಯಕ್ತಪಡಿಸಿದ್ದೇನೆ. ಎಷ್ಟೋ ಬಾರಿ ನನ್ನ ನಿಲುವುಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಾಗಿವೆ. ಅಖಂಡವಾದ ರಾಷ್ಟ್ರೀಯತೆಯಿಂದ ಪ್ರಚಂಡ ಎಡಪಂಥೀಯ ಧೋರಣೆಯ ವರೆಗೆ ಎಲ್ಲಾ ನೆಲೆಗಳಲ್ಲೂ ನನ್ನ ವೈಚಾರಿಕತೆಯನ್ನು ರೂಪಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ವಿಫಲನಾಗಿದ್ದೇನೆ. ಈಗೀಗ ನನಗೆ ಸ್ಪಷ್ಟವಾಗುತ್ತಿರುವ ಅಂಶವೆಂದರೆ, ನನ್ನ ವಿಫಲತೆಗೆ ಮುಖ್ಯವಾದ ಕಾರಣ ನಾನು ನನ್ನ ವೈಚಾರಿಕತೆಯನ್ನು ರೂಪಿಸಿಕೊಳ್ಳಲು ನಮ್ಮ ಮಾಧ್ಯಗಳನ್ನು ನೆಚ್ಚಿಕೊಂಡದ್ದು. ತುಂಬಾ ಚಿಕ್ಕಂದಿನಲ್ಲೇ ಒಬ್ಬ ಲೇಖಕನ ಪ್ರಭಾವಕ್ಕೆ ಒಳಗಾದರೆ, ಒಬ್ಬನ ವಿಚಾರಧಾರೆಗೆ ಮನಸೋತರೆ, ಒಬ್ಬನ ಚರಿಶ್ಮಾಗೆ ಬಲಿಯಾದರೆ ಮುಂದೆ ಆ ಪ್ರಭಾವದಿಂದ ಹೊರಬಂದು ಸ್ವಂತ ಚಿಂತನೆಯನ್ನು ಬೆಳೆಸಿಕೊಳ್ಳುವುದು ಕಷ್ಟವಾಗುತ್ತದೆ. ವಿಪರೀತವಾದ inconsistancy ತಲೆದೋರುತ್ತದೆ. ಹಿಂದೆ ಮನಃಪೂರ್ತಿಯಾಗಿ ಮಾಡಿದ ವಾದಗಳೆಲ್ಲವೂ ಹುರುಳಿಲ್ಲದವಾಗಿ ಕಾಣಿಸುತ್ತವೆ. ನಮ್ಮ ಮೇಲೆಯೇ ನಮಗೆ ನಂಬಿಕೆ ಹೊರಟಂತಾಗಿಬಿಡುತ್ತದೆ.
ಈ ಗೊಂದಲಗಳಲ್ಲಿ ಕೆಲಕಾಲ ತಲೆ ಕೆಡಿಸಿಕೊಂಡ ನಂತರ ನಾನು ಸಣ್ಣ ಬ್ಲಾಗುಗಳಲ್ಲಿ, ಪತ್ರಿಕೆಗಳಲ್ಲಿ ಸ್ಪಷ್ಟವಾದ ನಿಲುವುಗಳನ್ನಿಟ್ಟುಕೊಂಡು ಬರೆಯುತ್ತಿರುವ ಹಿರಿಯರನ್ನು ಕಂಡೆ. ಅವರ ಮಾಗಿದ ವೈಚಾರಿಕತೆ ನಾನು ಅದುವರೆಗೂ ಕಂಡ ಅಬ್ಬರದ ಪ್ರಚೋದನಾಕಾರಿ ಚಿಂತನೆಗಳಿಗಿಂತ ಹೆಚ್ಚು ಸಶಕ್ತವಾದದ್ದಾಗಿ ಕಂಡಿತು. ಅವರ ಬಳಿ ನನ್ನ ಗೊಂದಲಗಳನ್ನು ತೋಡಿಕೊಂಡು ಸೂಕ್ತವಾದ ಮಾರ್ಗದರ್ಶನವನ್ನು ಕೋರೋಣ ಅನ್ನಿಸಿತು. ಅದಕ್ಕೆ ಪೂರಕವಾಗಿ ಡಿ.ಎಸ್.ನಾಗಭೂಷಣ್ ‘ವಿಕ್ರಾಂತ ಕರ್ನಾಟಕ’ದ ತಮ ಅಂಕಣದಲ್ಲಿ ಯುವ ಜನಾಂಗಕ್ಕೆ ತಮ್ಮ ಚಿಂತನೆಯನ್ನು ಪರಿಚಯಿಸುವ ಉತ್ಶಾದ ಬಗ್ಗೆ ಬರೆದಿದ್ದರು. ಅಂತರ್ಜಾಲದಲ್ಲಿ ಅವರ ಬ್ಲಾಗು ಇದ್ದುದರಿಂದ ನಾನು ಅವರಿಗೆ ಒಂದು ಪತ್ರವನ್ನು ಕಳುಹಿಸಿದ್ದೆ.
ಸರ್ ನಮಸ್ಕಾರ,
ನಾನೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ. ಬೆಂಗಳೂರಿನ ಕಾಲೇಜೊಂದರಲ್ಲಿ ಓದುತ್ತಿದ್ದೇನೆ. ನನಗೆ ಬರವಣಿಗೆಯಲ್ಲಿ ಆಸಕ್ತಿಯಿದೆ. ಸಾಹಿತ್ಯವನ್ನು ಓದುವುದು ಹವ್ಯಾಸ.ಈ ಹಿಂದೆ ನಿಮ್ಮ ಬರಹವೊಂದರಲ್ಲಿ ಎಡ ಪಕ್ಷಗಳು ಹಾಗೂ ಕಾಂಗ್ರೆಸ್ಸಿನ ರಾಜಕಾರಣದ ಬಗ್ಗೆ ಬರೆಯುತ್ತಾ ಅವರು ಕೋಮುವಾದಿ ಬಿಜೆಪಿಯನ್ನು ಹೊರಗಿಡುವುದಕ್ಕಾಗಿ ನಮಗೆ ಅಧಿಕಾರಕ್ಕೆ ತನ್ನಿ ಎನ್ನುತ್ತಿರುವುದು ಅದನ್ನೇ ತಮ್ಮ ಪ್ರಣಾಳಿಕೆಯಾಗಿಸಿಕೊಂಡಿರುವುದರ ಬಗ್ಗೆ ಬರೆದಿದ್ದನ್ನು ಓದಿ ನನಗನ್ನಿಸಿದ್ದು ಹೀಗೆ.
ಎಡ ಪಕ್ಷಗಳು ಹಾಗೂ ಕಾಂಗ್ರೆಸ್ ತಮ್ಮ ರಾಜಕೀಯ ಸಿದ್ಧಾಂತದ ಸ್ಪಷ್ಟತೆಯನ್ನು ನಮ್ಮಂತಹ ಸಾಮಾನ್ಯ ಯುವಕರಿಗೆ ಮುಟ್ಟುವ ಹಾಗೆ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಎಲ್ಲಾ ವಿದ್ಯಮಾನಗಳ ಬಗ್ಗೆ ಸ್ಪಷ್ಟವಾದ (ಅದು ನ್ಯಾಯ ಸಮ್ಮತವಾಗಿರಬೇಕಿಲ್ಲ) ನಿಲುವುಗಳನ್ನು ಕೊಟ್ಟು ಅದಕ್ಕೆ ಸಾಕ್ಷಿಗಳನ್ನು ಕೊಡುವ ಬಲಪಂಥೀಯತೆಗೆ ಸಹಜವಾಗಿ ಆಕರ್ಷಣೆ ಬೆಳೆಯುತ್ತದೆ. ಮೋದಿಯನ್ನು ವಿರೋಧಿಸುವಲ್ಲಿ ನಮ್ಮ ಮಾಧ್ಯಮಗಳು ಹಾಕಿದ ಶ್ರಮದಲ್ಲಿ ಅರ್ಧದಷ್ಟನ್ನು ಮೋದಿ ಪ್ರತಿಪಾದಿಸುವ ಸಿದ್ಧಾಂತದ ಅಪಾಯಗಳು ಹಾಗೂ ಅದಕ್ಕೆ ಪರ್ಯಾಯವಾದ ಚಿಂತನೆಯನ್ನು ಪ್ರಚುರ ಪಡಿಸುವಲ್ಲಿ ಮಾಧ್ಯಮಗಳು ಎಡವಿದವೇ?
ವಿಪರೀತವಾದ ತಾತ್ವಿಕ ಚಿಂತನೆಯ ಹಿನ್ನೆಲೆ, ಪೂರ್ವಾಗ್ರಹವಿಲ್ಲದ ಪ್ರಗತಿಪರ ಚಿಂತನೆಯನ್ನು ಬೆಳೆಸಿಕೊಳ್ಳುವುದಕ್ಕೆ ಬೇಕಾದ ಬದ್ಧತೆಗಳಿಗಿಂತ ಅತಿ ಸುಲಭವಾಗಿ ಹೊಂದಬಹುದಾದ ಬಲಪಂಥೀಯ ಸಿದ್ಧಾಂತ ನಮಗೇಕೆ ಪ್ರಿಯವೆನಿಸುತ್ತದೆ?
ಏಪ್ರಿಲ್ ೪ರ ವಿಕ್ರಾಂತ ಕರ್ನಾಟಕದ ನಿಮ್ಮ ಅಂಕಣಬರಹವನ್ನು ಓದಿದಾಗ, ನಿಮ್ಮಲ್ಲಿ ಆತಂಕ ಹುಟ್ಟಿಸಿದ ಯುವಪೀಳಿಗೆಯ ಮನಸ್ಥಿತಿಯ ಬಹುಪಾಲನ್ನು ನಾನೂ ಸಹ ಹೊಂದಿದ್ದೇನೆ. ಆದರೆ ನನಗೆ ಆ ಬಗ್ಗೆ guilt ಇದೆ. ನನ್ನ ಪ್ರೊಫೈಲ್‌ನಲ್ಲಿಂದ ನಾನು ಬರೆದಿರುವ ಲೇಖನ, ಬ್ಲಾಗ್ ಬರಹಗಳನ್ನು ಒಮ್ಮೆ ಅವಲೋಕಿಸಿದರೆ ನನ್ನ ಮನಸ್ಥಿತಿಯ ಸ್ವರೂಪ ನಿಮಗೆ ಸಿಗಬಹುದು ಎಂದು ಆಶಿಸುತ್ತೇನೆ. ಆದರೆ ನನ್ನ ಸುತ್ತ ಇರುವ ಬಲಪಂಥೀಯತೆಯ ಪ್ರಭಾವವನ್ನು ಮೀರಲು ನನಗೆ ಸಾಕಷ್ಟು ಅಂತಃಸತ್ವದ ಆವಶ್ಯಕತೆ ಇದೆ. ನನ್ನ ಚಿಂತನೆಯನ್ನು ಪುನರ್ ವಿಮರ್ಶಿಸಿಕೊಳ್ಳಬೇಕು ಅನ್ನಿಸುತ್ತಿದೆ.
ನಾನು ಎಲ್ಲಿಂದ ಪ್ರಾರಂಭಿಸಲಿ? ನನಗೆ ಮಾರ್ಗದರ್ಶನದ ಆವಶ್ಯಕತೆಯಿದೆ. ನನ್ನನ್ನು ನನ್ನ ಪೂರ್ವಾಗ್ರಹಗಳಿಂದ ಬೇರ್ಪಡಿಸಬಲ್ಲ, ಸ್ವತಂತ್ರವಾದ ಚಿಂತನೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗುವ ಪುಸ್ತಕಗಳನ್ನೋ, ಚಿಂತನೆಗಳನ್ನೋ ನನಗೆ ಪರಿಚಯಿಸಿದರೆ ನಾನು ಕೃತಜ್ಞ. ನಿಮ್ಮ ಮಾರ್ಗದರ್ಶನದ ಪ್ರತಿಕ್ರಿಯೆಗಾಗಿ ನಿರೀಕ್ಷಿಸುತ್ತಿರುತ್ತೇನೆ. ನಿಮ್ಮ ಸಮಯಕ್ಕಾಗಿ ಧನ್ಯವಾದಗಳು.
ಸುಪ್ರೀತ್.ಕೆ.ಎಸ್
ಅದರಲ್ಲಿ ನನ್ನ ಗೊಂದಲಗಳನ್ನು ಹೇಳಿಕೊಂಡು ಸೂಕ್ತ ಮಾರ್ಗದರ್ಶನ ಕೇಳಿದ್ದೆ. ಉತ್ತರ ಬರುತ್ತದೆ ಎಂದು ನಿರೀಕ್ಷಿರಲಿಲ್ಲ. ಇಂದು ಸಂಪದದಲ್ಲಿ ಅವರ ಲೇಖನವೊಂದನ್ನು ಓದುವಾಗ ಅವರು ತಮ್ಮ ಲೇಖನದಲ್ಲಿ ನನ್ನ ಪತ್ರವನ್ನು ಪ್ರಸ್ತಾಪಿಸಿ ಉತ್ತರಿಸಿರುವುದನ್ನು ಕಂಡು ಕುತೂಹಲಗೊಂಡೆ. ವಿವರವಾಗಿ ಅವರ ಪತ್ರವನ್ನು ಓದಿ ನನ್ನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಅವರ ಮೇಲೆ ಗೌರವ ಇಮ್ಮಡಿಯಾಯ್ತು.
ನನ್ನಂಥದ್ದೇ ಆದ ಗೊಂದಲಗಳಿರುವವರಿಗೆ ನಾಗಭೂಷಣ್‌ರ ಈ ಲೇಖನ ಒಳ್ಳೆಯ ದಿಕ್ಸೂಚಿಯಾಗಬಲ್ಲದು. ತಮ್ಮ ಲೇಖನದಲ್ಲಿ ಅವರು ವ್ಯಕ್ತಪಡಿಸಿದ ಕೆಲವು ವಿಚಾರಗಳನ್ನು ಸಂಪದದಿಂದ ಆಯ್ದು ಇಲ್ಲಿ ಕೊಟ್ಟಿರುವೆ:
ಇತ್ತೀಚೆಗೆ ನನ್ನ ಇದೇ ಲೇಖನದ ಬಗ್ಗೆ ಕೆ.ಎಸ್.ಸುಪ್ರೀತ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರ ಪ್ರತಿಕ್ರಿಯೆಯೊಂದನ್ನು, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಅಗತ್ಯ ಎಂಬರ್ಥದಲ್ಲಿ ನನಗೆ ರವಾನಿಸಿದ್ದಾರೆ. ಇವರು ನನ್ನ ಈ ಲೇಖನದಲ್ಲಿ ವ್ಯಕ್ತವಾಗಿರುವ ಆತಂಕಗಳ ಬಗ್ಗೆ ತಾತ್ವಿಕವಾಗಿ ಆಂತರಂಗಿಕ ಸಹಮತ ಹೊಂದಿರುವುದಾದರೂ, ಬಹಿರಂಗ ವಾತಾವರಣ ಅದಕ್ಕೆ ಪೂರಕವಾಗಿಲ್ಲದಿರುವುದರ ವಾಸ್ತವದ ಬಗ್ಗೆ ಬರೆದಿದ್ದಾರೆ. ತಾವು ಸಹ ಇಂತಹ ವಾತಾವರಣದ ಸಹಜ ಬಲಿಯಾಗಿದ್ದು, ಇದರಿಂದ ತಮ್ಮಂತಹವರು ಹೊರ ಬರಲು ಪೂರಕವಾಗುವಂತಹ ವಾತಾವರಣವನ್ನು ನಿರ್ಮಿಸಲು ಸೆಕ್ಯುಲರ್‌ವಾದಿಗಳು ಏಕೆ ಪ್ರಯತ್ನಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಾಗೇ, ಈ ವಿಷಯದಲ್ಲಿ ಮಾರ್ಗದರ್ಶಕವಾಗುವಂತಹ ಸಾಹಿತ್ಯವನ್ನೂ ಸೂಚಿಸಿ ಎಂದು ಸುಪ್ರೀತ್ ಕೇಳಿದ್ದಾರೆ.
ಮೊದಲಿಗೆ, ನಾನೇನೂ ಇಂದಿನ ಸೆಕ್ಯುಲರ್ವಾದಿಗಳ ವಕ್ತಾರನಲ್ಲ ಎಂದು ಸ್ಪಷ್ಟಪಡಿಸ ಬಯಸುವೆ. ಈ ಸೆಕ್ಯಲರ್‌ವಾದವೆಂಬುದೇ ಅನುಮಾನಾಸ್ಪದತೆಗೆ ಈಡಾಗಿರುವ ಇಂದಿನ ರಾಜಕೀಯ ಸನ್ನಿವೇಶದಲ್ಲ್ಲಿ ನಿಂತು, ಕೋಮುವಾದದ ವಿರುದ್ಧ ಮಾತನಾಡುವಾಗ ಅನೇಕ ತಪ್ಪು ಕಲ್ಪನೆಗಳುಂಟಾಗುವ ಸಂಭವವಿದೆ. ಏಕೆಂದರೆ, ಕೋಮುವಾದದ ವಿರುದ್ಧ ಏಕೈಕ ಅಸ್ತ್ರ ಸೆಕ್ಯುಲರ್‌ವಾದ ಎಂಬ ನಂಬಿಕೆಯನ್ನು ಸೃಷ್ಟಿಸಲಾಗಿದೆ. ಮೂಲತಃ ಭೌತವಾದಿ ರಾಜಕಾರಣದ ಪ್ರತಿಪಾದಕರಾದ ಕಟ್ಟಾ ಎಡಪಂಥೀಯರು ಸೃಷ್ಟಿಸಿರುವ ನಂಬಿಕೆಯಿದು. ಆದರೆ ಸೆಕ್ಯುಲರಿಸಂ ಎಂದರೇನೆಂದು ಈವರೆಗೆ ಈ ಯಾರೂ ಖಚಿತವಾಗಿ, ನಿರ್ದಿಷ್ಟವಾಗಿ ನಿರೂಪಿಸಿಲ್ಲ. ಅದಕ್ಕೆ ನಮ್ಮ ಯಾವುದೇ ಭಾರತೀಯ ಭಾಷೆಯಲ್ಲೂ ಸಮರ್ಪಕವಾದ ಸಮಾನ ಶಬ್ದವನ್ನು ಟಂಕಿಸಲಾಗಿಲ್ಲ. ಧರ್ಮ ನಿರಪೇಕ್ಷತೆ ಎಂಬ ಶಬ್ದದಿಂದ ಹಿಡಿದು ಇದಕ್ಕೆ ತದ್ವಿರುದ್ಧ ಅರ್ಥವಿರುವ ಸರ್ವಧರ್ಮ ಸಮಭಾವ ಎಂಬ ಶಬ್ದದವರೆಗೆ ಇದರರ್ಥವನ್ನು ಎಳೆದಾಡಲಾಗಿದೆ! ಇದಕ್ಕೆ ಕಾರಣ ಇದು ಆಧುನಿಕತೆಯ ಹಂಬಲದಲ್ಲಿ ನಮ್ಮ ಸಂವಿಧಾನ ನಿರ್ಮಾತೃಗಳು ಐರೋಪ್ಯ ರಾಜಕಾರಣದಿಂದ ಕಿತ್ತು ತಂದು ಇಲ್ಲಿ ನೆಡಲಾಗಿರುವ ಪರಿಕಲ್ಪನೆಯಾಗಿರುವುದೇ ಆಗಿದೆ.
ಹಾಗೇ ಸುಪ್ರೀತ್ ಅವರಿಗೆ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾರನ್ನು ಮುಕ್ತ ಮನಸ್ಸಿನಿಂದ ಓದಿ ಎಂದು ಸೂಚಿಸಬಯಸುವೆ. ರಾಷ್ಟ್ರ ವಿಭಜನೆ ಸೃಷ್ಟಿಸಿದ್ದ ಕೋಮು ದಳ್ಳುರಿಯ ಮಧ್ಯೆಯೂ, ಪಾಕಿಸ್ಥಾನಕ್ಕೆ ಕೊಡಬೇಕಾದ ನಿಧಿಯನ್ನು ಕೊಡುವಂತೆ ಸಾರ್ವಜನಿಕವಾಗಿ ಒತ್ತಾಯಿಸಿ ಹಿಂದೂ ಕೋಮುವಾದಿಯೊಬ್ಬನ ಗುಂಡಿಗೆ ಬಲಿಯಾದ ಸನಾತನ ಹಿಂದೂ ಎನ್ನಿಸಿಕೊಂಡಿದ್ದ ಗಾಂಧಿ; ತಾವು ರೂಪಿಸಿದ್ದ ಸಮಗ್ರ ಹಿಂದೂ ನಾಗರಿಕ ಸಂಹಿತೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಅವಕಾಶ ಕೊಡದ ಸರ್ಕಾರದ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹೊರಬಂದ ಆಧುನಿಕತಾವಾದಿ ಅಂಬೇಡ್ಕರ್ ಮತ್ತು ಸಾಮಾನ್ಯ ನಾಗರಿಕ ಸಂಹಿತೆಯ ಜಾರಿಯನ್ನು ತಮ್ಮ ಪಕ್ಷದ ಒಂದು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಪ್ರಚಾರ ಮಾಡಬಲ್ಲವರಾಗಿದ್ದ ರಾಜಕೀಯ ದುಸ್ಸಾಹಸಿ ಲೋಹಿಯಾ ಹೊಸ ರಾಷ್ಟ್ರಕ್ಕೆ ಹೊಸ ಧರ್ಮ ಸಂಹಿತೆಯೊಂದನ್ನು ರೂಪಿಸಿ ಸೆಕ್ಯುಲರಿಸಂಗೆ ಹೊಸ ಅರ್ಥ ಕೊಡಲೆತ್ನಿಸಿದವರು. ಇವರ ಜೊತೆಗೇ, ಈಚಿನ ಅಸ್ಘರಾಲಿ ಇಂಜಿನಿಯರರ ಪುಸ್ತಕ - ಲೇಖನಗಳನ್ನು ಓದಿದರೆ ಚೆನ್ನು. ಆಗ ಆರೋಗ್ಯಕರ ವರ್ತಮಾನವನ್ನು ಕಟ್ಟಲು ಚರಿತ್ರೆಯನ್ನು ಎಷ್ಟು ಎಚ್ಚರಿಕೆ ಮತ್ತು ವಿವೇಕಗಳಿಂದ ಅರ್ಥ ಮಾಡಿಕೊಂಡು ಬಳಸಿಕೊಳ್ಳಬೇಕಾಗುತ್ತದೆ ಎಂಬುದು ಗೊತ್ತಾಗುತ್ತದೆ.
Filed under: ವಿಚಾರಧಾರೆ | Tagged: ಅಂಕಣ, ಅಂಬೇಡ್ಕರ್, ಅಮೇರಿಕಾದಿಂದ ರವಿ, ಗಾಂಧಿ, ಚುನಾವಣೆ, ಡಿ.ಎಸ್.ನಾಗಭೂಷಣ್, ನಾಗಸಂಪದ, ರವಿ ಕೃಷ್ಣಾ ರೆಡ್ಡಿ, ಲೋಹಿಯಾ, ವಿಕ್ರಾಂತ ಕರ್ನಾಟಕ, ವೈಚಾರಿಕತೆ, ಸಂಪದ | No Comments »
ಗೋಡೆಗಳನ್ನು ನುಚ್ಚುನೂರಾಗಿಸುವಂತೆ ಕೊಚ್ಚಿ ಕೊಂಡುಹೋಗಬಲ್ಲ ಅಲೆ. ಆತನನ್ನು ಎದುರಿಸುವುದಕ್ಕಾಗಿ, ಆತನೊಂದಿಗೆ ಅನುಸಂಧಾನ ಮಾಡಿಕೊಳ್ಳುವುದಕ್ಕಾಗಿ ಅಂತಲೇ ಒಂದು